ಬಿಡದಿ - 
ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ರಾಮನಗರ ತಾಲ್ಲೂಕಿನ ಒಂದು ಹೋಬಳಿ ಮತ್ತು ಊರು. ಬೆಂಗಳೂರು-ಮೈಸೂರು ರಸ್ತೆಯಲ್ಲಿ, ಬೆಂಗಳೂರಿನ ನೈರುತ್ಯಕ್ಕೆ 32 ಕಿ.ಮೀ. ದೂರದಲ್ಲೂ ರಾಮನಗರದ ಈಶಾನ್ಯಕ್ಕೆ 16 ಕಿ.ಮೀ. ದೂರದಲ್ಲೂ ಇದೆ. ಮೈಸೂರು-ಬೆಂಗಳೂರು ರೈಲು ಮಾರ್ಗದಲ್ಲಿ ಇದೊಂದು ನಿಲ್ದಾಣ. ಜನಸಂಖ್ಯೆ 2380 (1971). ಈ ಊರಿನ ಸುತ್ತ ಬಂಜರು ಭೂಮಿ ಇದ್ದು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಆದರೂ ಕೊಳವೆ ಬಾವಿಗಳ ಸಹಾಯದಿಂದ ಹಣ್ಣಿನ ತೋಟಗಳನ್ನು ಮಾಡುವ ಪ್ರಯತ್ನ ನಡೆದಿದೆ. ರಾಗಿ, ಅವರೆ, ಹುರುಳಿ, ಹಿಪ್ಪನೇರಳೆ ಬೆಳೆಸುತ್ತಾರೆ. ರೇಷ್ಮೆ ಸಾಕಣೆ ಉಂಟು. ಊರಿಗೆ ಸುಮಾರು 4 ಕಿ.ಮೀ. ದೂರದಲ್ಲಿ ಹಾಗಲಹಳ್ಳಿಯ ಕಡೆ ಸಣ್ಣ ಬೆಟ್ಟವಿದೆ. ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ, ತಂತಿ ಮತ್ತು ವಿದ್ಯುತ್ ಸೌಲಭ್ಯಗಳಿವೆ.									
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ